ನಾನು ನಿಮ್ಮ ಮುಂದೆ ಈಗ ಹೇಳಲು ಹೊರಟಿರೋದು 31 ವರ್ಷಗಳ ಹಿಂದಿನ ಕಥೆ.. 9/8/1992, ನಮ್ಮ ಮನೆಯಲ್ಲಿ ನನಗೆ ನನ್ನ ತಂದೆಗೆ ತುಂಬಾ ಜಗಳ.. ನಾನು ಬಹು ದೊಡ್ಡ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿಮಾನಿ. ನಾನು ಓದುತ್ತಿದ್ದ ಸ್ಕೂಲಿನ ಹಿಂದೆ Dr.V.Ravichandran ಅವರು ‘Guru Brahma’ ಚಿತ್ರದ ಚಿತ್ರೀಕರಣಕ್ಕೆ ಬಂದಿದ್ದರು.. ಅವರ್ನ ನೋಡ್ಬೇಕು ಅನ್ನೋ ಆಸೆ. ನನ್ನ ಸೋಶಿಯಲ್ ಸ್ಟಡೀಸ್ test ಪೇಪರ್ನ ಬಿಟ್ಟು ಆ ಶೂಟಿಂಗ್ ಜಾಗಕ್ಕೆ ಹೋಗಿದ್ದೆ. ನನ್ನ ದುರಾದೃಷ್ಟ ನಾನು ಅಲ್ಲಿ ರವಿ ಸಾರ್ ನ ನೋಡಕ್ಕೆ ಆಗಲಿಲ್ಲ..
ಮನೆಗೆ ಬಂದ ಮೇಲೆ ನಮ್ಮಪ್ಪನಿಗೆ ನಾನು ಟೆಸ್ಟ್ ಬರೆದಿಲ್ಲ ಅಂತ ಗೊತ್ತಾಯ್ತು. ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಮನೆಯಲ್ಲಿ ತುಂಬಾ ದೊಡ್ಡ ಜಗಳ. ನಾನು ಹಠ ಹಿಡಿದು ಕೂತೆ, “ನಾನು ರವಿಚಂದ್ರನ್ ನ ನೋಡೋವರೆಗು School ಗೆ ಹೋಗಲ್ಲ, Test ಬರೆಯೋಲ್ಲ ಅಂತ.”ಈ ಅಪ್ಪ-ಮಗನ ಜಗಳನಾ ನೋಡಿ, ನನ್ನ ತಾಯಿಗೆ ಸಾಕಾಗಿ, ಬೇಜಾರಾಗಿ ಆಗಸ್ಟ್ 9 ಸಂಜೆ ಸುಮಾರು ಏಳು ಗಂಟೆ ಸಮಯ; ನನ್ನ ಅಮ್ಮ ಅವರ ಸ್ನೇಹಿತೆಯೊಂದಿಗೆ ಆಟೋದಲ್ಲಿ ರವಿಚಂದ್ರನ್ ಅವರ ಮನೆ ಬಳಿ ಹೋಗಿದ್ದಾರೆ. ಯಥಾಪ್ರಕಾರ ಅಲ್ಲಿನ watchman ನನ್ನ ತಾಯಿಯವರನ್ನ ಮನೆಯ ಒಳಗೆ ಬಿಡಲಿಲ್ಲ..
ಅದೇ ಸಮಯಕ್ಕೆ ಸರಿಯಾಗಿ ರವಿ ಸರ್ ಅವರ ತಾಯಿ Smt Pattammal Veeraswamy ಯವರು ಗೇಟ್ ಬಳಿ ಬಂದು ಕೇಳಿದ್ದಾರೆ “ಯಾರಮ್ಮ.? ಏನಾಗಬೇಕಾಗಿತ್ತು?” ಅಂತ. ಆಗ ನನ್ನ ತಾಯಿ ನನ್ನ ಬಗ್ಗೆ, ರವಿ ಸರ್ ಮೇಲಿರುವ ನನ್ನ ಹುಚ್ಚು ಅಭಿಮಾನದ ಬಗ್ಗೆ, ಮನೆಯಲ್ಲಿ ನನಗೆ ನಮ್ಮಪ್ಪನಿಗೆ ನಡೆದ ಜಗಳದ ಬಗ್ಗೆ, ಎಲ್ಲವನ್ನು ರವಿ ಸರ್ ಅವರ ತಾಯಿಯ ಬಳಿ ವಿವರಿಸಿದ್ದಾರೆ. “ನಿಮ್ಮ ಮಗನನ್ನ ನೋಡೋ ತನಕ ನನ್ ಮಗ ಸ್ಕೂಲ್ ಹೋಗಲ್ಲ ಅಂತ ಹಠ ಮಾಡುತ್ತಿದ್ದಾನೆ. ದಯವಿಟ್ಟು ರವಿಚಂದ್ರನ್ ರವರನ್ನು ನನ್ನ ಮಗನಿಗೆ ಭೇಟಿ ಮಾಡಲು ಒಂದು ಅವಕಾಶ ಮಾಡಿಕೊಡಿ” ಎಂದು ನನ್ನ ತಾಯಿ ಶ್ರೀಮತಿ ಪಟ್ಟಮ್ಮಾಳ್ ರವರನ್ನು ವಿನಂತಿಸಿ ಕೊಂಡಿದ್ದಾರೆ..
ನಾವು ಮಧ್ಯಮ ವರ್ಗದ ಸಾಮಾನ್ಯ ಜನ. ನಾವು ಯಾರೂ ಏನು ಅಂತ ಕೂಡ ಪಟ್ಟಮ್ಮಾಳ್ ಅವರಿಗೆ ತಿಳಿದಿರಲಿಲ್ಲ. ಒಂದು ಮಾನವೀಯತೆ ದೃಷ್ಟಿಯಿಂದ “ಸರಿಮಾ, ನಿಮ್ಮ ಮಗನನ್ನ ನಾಳೆ ಬೆಳಗ್ಗೆ 7:30 ಗೆ ಕರೆದುಕೊಂಡು ಬನ್ನಿ. ನಾನು ರವಿಗೆ ಈ ವಿಷಯದ ಬಗ್ಗೆ ಹೇಳಿರ್ತೀನಿ” ಅಂತ ಹೇಳಿ ಕಳುಹಿಸಿದರು. ಮರುದಿನ ಆಗಸ್ಟ್ 10, 1992 ಬೆಳಿಗ್ಗೆ ಏಳೂವರೆಗೆ ಸರಿಯಾಗಿ ನಾನು, ನನ್ನ ಅಪ್ಪ-ಅಮ್ಮ, ಅಮ್ಮನ ಸ್ನೇಹಿತೆ ನಳಿನೀ, ನನ್ನ ಸ್ನೇಹಿತ ದೀಪಕ್ ಹಾಗು ಸಂತೋಷ್ ಎಲ್ಲರೂ ‘ರವಿಕಲಾ’ ನಿವಾಸದ ಮುಂದೆ ಹಾಜರ್.. ಅಂದು ರವಿಚಂದ್ರನ್ ಅವರ ‘Annaiah’ ಸಿನಿಮಾ ಮುಹೂರ್ತ. ಶ್ವೇತವಸ್ತ್ರಧಾರಿಯಾಗಿ ನನ್ನ ಗುರುಗಳನ್ನು ನಾನು ನೋಡಿದ ಘಳಿಗೆ. ನನ್ನ ಗುರುಗಳೊಂದಿಗೆ ಮೊದಲನೆಯ ಫೋಟೋ click ಮಾಡಿದ ಸಂದರ್ಭ. ಅವರನ್ನು ನೋಡಿದ ಆ ಕ್ಷಣ, ಧರೆಗಿಳಿದ ಭಗವಂತನನ್ನು ನೋಡಿದ ಹಾಗೆ ಆಯಿತು. ನನ್ನ ಹಾಗೂ ನನ್ನ ಗುರುಗಳ ಪ್ರಥಮ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದು ಈ ಮಹಾತಾಯಿ ಪಟ್ಟಮ್ಮಾಳ್ ವೀರಾಸ್ವಾಮಿಯವರೆ. ಆ ಕ್ಷಣದಲ್ಲಿ ನನಗಾದ ರೋಮಾಂಚನ, ಅನುಭವ ಎದೆಂದು ಅವಿಸ್ಮರಣೀಯ.
ನನ್ನಂತಹ ಒಬ್ಬ ಸಾಮಾನ್ಯ ಅಭಿಮಾನಿಯ ಆಸೆಗೆ ಸ್ಪಂದಿಸಿ, ಅವರ ಮಗನ ಬಳಿ ಮಾತನಾಡಿ, ಹಿಂದೆ ಮುಂದೆ ಯೋಚಿಸದೆ, ಒಳ್ಳೆಯದನ್ನು ಬಯಸಿ, ನೂರಾರು ಕುಟುಂಬಗಳಿಗೆ ಅನ್ನ ಹಾಕಿದ ಕೈಯಿ ಶ್ರೀಮತಿ ಪಟ್ಟಮ್ಮಾಳ್ ವೀರಾಸ್ವಾಮಿ. ತನ್ನ ಪತಿ ಶ್ರೀ ಎನ್. ವೀರಾಸ್ವಾಮಿಯವರ ಬಾಳಿನ ಬಂಡಿಗೆ ಜೊತೆಯಾಗುತ್ತಾ, ಕನಸುಗಾರ Dr.V.Ravichandran ಅವರ ಎಲ್ಲಾ ನಿರ್ಧಾರಗಳನ್ನು ಗೌರವಿಸುತ್ತಾ , ಮತ್ತೊಬ್ಬ ಮಗ ಬಾಲಾಜಿ, ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಸಾಕಷ್ಟು ಸಿನಿ ಕಾರ್ಮಿಕರನ್ನು ಪ್ರೀತಿಸುತ್ತ, ಇತ್ತೀಚಿಗಷ್ಟೇ ನಮ್ಮನ್ನೆಲ್ಲ ಬಿಟ್ಟು ಅಗಲಿದರು. ದೈಹಿಕವಾಗಿ ಅವರು ನಮ್ಮೊಂದಿಗೆ ಇಲ್ಲದೆ ಇರಬಹುದು. ಅವರು ಮಾಡಿದ ಒಳ್ಳೆಯ ಕೆಲಸಗಳು, ಅವರು ತೋರಿಸಿದ ಪ್ರೀತಿ ಸದಾ ನಮ್ಮೊಂದಿಗೆ ನಮ್ಮ ನೆನಪಿನೊಂದಿಗೆ.
Comments