ಅಂದುಕೊಂಡಿದ್ದನ್ನ ಆ ಕ್ಷಣದಲ್ಲಿ, ಆ ನಿಮಿಷದಲ್ಲಿ, ಆ ದಿನದಲ್ಲಿ, ಆ ಸಮಯದಲ್ಲಿ ಮಾಡಬೇಕು ಅನ್ನೋದನ್ನ ನಾನು ಕಲಿತ ದಿನದ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
2017, ಜೂನ್ 13,
ನನ್ನ ಬದುಕಿನಲ್ಲಿ ನಾನೆಂದೂ ಮರೆಯದ ದಿವಸ. ಜುಲೈ 9, 1977, ನಾನು ಹುಟ್ಟಿದ ದಿನ. ಆಗ ಹೆರಿಗೆಯ ಸಂದರ್ಭದಲ್ಲಿ ನನ್ನ ತಾಯಿ ಆಸ್ಪತ್ರೆಗೆ ಸೇರಿದ್ದು ಬಿಟ್ಟರೆ ಮತ್ತೆ Hospital ಗೆ ದಾಖಲಾಗಿದ್ದು ಇದೇ ಜೂನ್ 13, 2017 ಅಂದು. 40 ವರ್ಷಗಳು ನೆಮ್ಮದಿಯಾಗಿ, ಸುಖವಾಗಿ, ಆರೋಗ್ಯದಿಂದ ಇದ್ದ ನನ್ನ ತಾಯಿಗೆ ಅಂದು ಅವರ health ನಲ್ಲಿ ಬಹಳ ವ್ಯತ್ಯಾಸವಾಯಿತು. ಗಾಬರಿಗೊಂಡು ವೈದ್ಯರ ಬಳಿ ತೋರಿಸಿದಾಗ ಅವರು ಅಲ್ಲಿ ಹೇಳಿದ ವಿಷಯ ನನಗೆ, ನನ್ನ ಅಪ್ಪನಿಗೆ, ನನ್ನ ಶ್ರೀಮತಿಗೆ, ನಮ್ಮ ಕುಟುಂಬಕ್ಕೇನೆ ದೊಡ್ಡ ಆಘಾತವಾಯಿತು.
“She is suffering from 4th stage breast cancer” ಇದು ವೈದ್ಯರು ಹೇಳಿದ ಮಾತು.
ಯಾವ ಸೂಚನೆ, ಮುನ್ಸೂಚನೆಯೂ ಇಲ್ಲ. ಚೆನ್ನಾಗಿ ಮಾತನಾಡಿಕೊಂಡಿದ್ದ ನನ್ನ ಅಮ್ಮ ಅವರ ಒಳಗಡೆ ಇಂಥ ಒಂದು ರಾಕ್ಷಸ ಕಾಯಿಲೆಯನ್ನು ಅಡಗಿಸಿಕೊಂಡಿದ್ದಾರೆ ಎಂಬ ಸಣ್ಣ ಸುಳಿವು ಕೂಡ ನಮ್ಯಾರಿಗೂ ತಿಳಿಯಲಿಲ್ಲ.
ಬೆಳಗ್ಗೆ ಸುಮಾರು 11:30 – 12 ಗಂಟೆಗೆ Hospital ಗೆ Admit ಮಾಡಿದ್ವಿ, ಸಂಜೆ 4:00 ವರ್ಗು ಅವರು emergency ನಲ್ಲಿ ಇದ್ರು. ನಂತರ ಅವರನ್ನು ward ಗೆ shift ಮಾಡಿದ್ರು. ನನ್ನ ತಾಯಿಗೆ ಅರೆ ಬರೆ ಜ್ಞಾನ. ಒಮ್ಮೊಮ್ಮೆ ಚೆನ್ನಾಗಿ ಮಾತಾಡ್ತಿದ್ರೆ, ಇನ್ನೊಮ್ಮೆ ಅವರು ಏನ್ ಮಾತಾಡ್ತಿದ್ದಾರೆ ಅನ್ನೋದು ಅವರಿಗೆ ಗೊತ್ತಿರಲಿಲ್ಲ. ನಾನು ಆ ಸಂದರ್ಭದಲ್ಲಿ ಸುಮಾರು ಹೊತ್ತುಗಳ ಕಾಲ, ಅವರ ಹಸ್ತವನ್ನು ನನ್ನ ಕೈಯೊಳಗೆ ಇಟ್ಟುಕೊಂಡು ಮನಸ್ಸಿನಲ್ಲಿ ಇದ್ದ ನನ್ನ ಮಾತುಗಳನ್ನು ಮೌನವಾಗಿಯೇ ನನ್ನ ತಾಯಿಗೆ ತಲುಪಿಸುತ್ತಿದ್ದೆ.
ಸಂಜೆ ಸುಮಾರು 7:30 ಸಮಯ. ನನ್ನ ಮಕ್ಕಳಿಬ್ಬರು ಶಾಲೆಯಿಂದ ಬಂದು ನಮ್ಮ ಪರಿಚಯಿಸ್ತರ ಮನೆಯಲ್ಲಿ ಇದ್ದರು. ಮನೆಯ ಒಳಗಡೆ, ಹೊರಗಡೆ ದೀಪ ಹಚ್ಚಿರಲಿಲ್ಲ. ನಮ್ಮ ತಂದೆ ರಾತ್ರಿ ಆಸ್ಪತ್ರೆಯಲ್ಲಿ ಇರ್ತೀನಿ ಅಂತ ಹೇಳಿದರು. ಅವರಿಗೆ ಒಂದಿಷ್ಟು ಬಟ್ಟೆ ತಂದು, ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಿ ವಿಷಯವನ್ನು ತಿಳಿಸಿ ಬರೋಣ ಎಂದು ನಾನು ನನ್ನ ಹೆಂಡತಿ ಆಸ್ಪತ್ರೆಯಿಂದ ಹೊರಡಲು ನಿರ್ಧರಿಸಿದೆವು.
ಅಲ್ಲಿಯವರೆಗೂ ನನ್ನ ತಾಯಿಯ ಕೈಯನ್ನು ಹಿಡಿದುಕೊಂಡಿದ್ದ ನನಗೆ ಆಗ ಅದನ್ನ ಬಿಡಿಸಿಕೊಳ್ಳುವಂತೆ ಸಮಯ. ಅಮ್ಮನಿಗೆ ಹೇಳಿದೆ “ಅಮ್ಮ ಮನೆ ಕಡೆಗೆ ಹೋಗಿ ಮತ್ತೆ ಬರ್ತೀನಿ” ಅಂತ. ಆಗ ನನ್ನ ಅಮ್ಮ ನನ್ನ ಬಳಿ ಆಡಿದ ಮಾತು ” ಹೋಗ್ತೀಯಾ? ” ಅಂತ.
Ward ನ ಬಾಗಿಲ ಬಳಿ ಬಂದ ನನಗೆ ಮತ್ತೆ ಅವರ ಕೈಯನ್ನ ಹಿಡ್ಕೊಬೇಕು ಅಂತ ಅನ್ನಿಸ್ತು, ಅವರನ್ನು ಮುಟ್ಟಬೇಕು ಅಂತ ಅನ್ನಿಸ್ತು ಆದರೆ ನನ್ನ ಒಳಗೆ ಇದ್ದ ಅಂತರಾತ್ಮ ನನ್ನನ್ನ ಯಾಮಾರಿಸ್ತು. ಹೇಗಿದ್ದರೂ ಇನ್ನು ಕೆಲವೇ ಹೊತ್ತಿನಲ್ಲಿ ವಾಪಸ್ ಬರ್ತೇವಲ್ಲ, ಆಗ ಅವರ ಕೈಯನ್ನು ಹಿಡ್ಕೊಳ್ಳೋಣ ಅಂದುಕೊಂಡು ನಾನು ಮನೆಗೆ ಬಂದೆ. ಬಹುಶಹ ನನ್ನೊಂದಿಗೆ ನನ್ನ ಅಮ್ಮ ಆಡಿದ ಕಡೆಯ ಮಾತು, ನಾನು ಅವರನ್ನು ಜೀವಂತವಾಗಿ ನೋಡಿದ ಕೊನೆಯ ಕ್ಷಣ ಅದೇ ಆಗಿರುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ.
ಮನೆಯಿಂದ ನಾನು ಹಿಂದಿರುಗಿ ಬರುವಷ್ಟರಲ್ಲಿ ನನ್ನಮ್ಮ ದೈಹಿಕವಾಗಿ ನನ್ನೊಂದಿಗೆ ಇರಲಿಲ್ಲ.
ತಾಯನ್ನ ಕಳೆದುಕೊಂಡಿರುವ ದುಃಖ ಒಂದು ಕಡೆಯಾದರೆ, ತಾಯಿಯ ಕೈಯನ್ನು ಹಿಡಿಯ ಬೇಕು ಎಂದು ಮನಸ್ಸು ಮತ್ತೊಂದು ಕಡೆ ಹೇಳಿದ್ರೆ, ಇನ್ನೊಂದು ಕಡೆ ಅದೇ ಮನಸ್ಸು ಮನೆಗೆ ಹೋಗಿ ಬರೋಣ ಅಂತ ಕರ್ಕೊಂಡ್ ಹೋಯಿತು. ನನ್ನ ತಾಯಿಯ ಕೈ ಹಿಡಿಯೋದಕ್ಕೆ ಕಾತುರನಾಗಿ ನಿಂತೆ. ಆದ್ರೆ ಆ ಕೈಯನ್ನ ನನಗೆ ಕೊಡೋಕೆ ನನ್ನ ಅಮ್ಮ ನೇ ಇರಲಿಲ್ಲ.
ಅಂದಿನಿಂದ ಇಂದಿನವರೆಗೂ ನಾನು ಪಾಲಿಸುತ್ತಿರುವ ಪಾಠ, ಅಂದುಕೊಂಡಿದ್ದನ್ನ ಆಗಿಂದಾಗಲೇ, ಆ ಘಳಿಗೆಯಲ್ಲಿ ಮಾಡಬೇಕು ಅನ್ನೋದನ್ನ.
I Miss you Amma
ಪುಟ್ಟು.
ಏನ್ ಹೇಳ್ಬೇಕೋ ಗೊತ್ತಾಗ್ತಿಲ್ಲ. ದೇವ್ರು ನಿಮ್ಮನ್ನು ಚೆನ್ನಾಗಿ ಇಡ್ಲಿ. ನಿಮ್ಮ ತಾಯಿಯ ಆತ್ಮಕ್ಕೆ ನೀವು ಮಾಡುವ ಒಳ್ಳೆಯ ಕೆಲಸದಿಂದ ಶಾಂತಿ ಸಿಗುತ್ತೆ ಅಂತ ನನ್ನ ನಂಬಿಕೆ. ಒಳ್ಳೆಯದಾಗಲಿ.