ನನ್ನ ಅಪ್ಪ ಅಮ್ಮನಿಗೆ ನಾನು ಒಬ್ಬನೇ ಮಗ.. ಮೊದಲಿನಿಂದಲೂ ನಾನು ಅಮ್ಮನ ಮಗ.. ನಾನೇನು ಕೇಳಿದ್ರೂ ನಮ್ಮಮ್ಮ ಇಲ್ಲ ಅಂತಿರಲಿಲ್ಲ.. ಅದು ಹಾಕುವ ಬಟ್ಟೆ ಇರಬಹುದು, ನೋಡುವ ಸಿನಿಮಾನೆ ಇರಬಹುದು, ಓಡಾಡುವ ಗಾಡಿಯೇ ಇರಬಹುದು.. ನನ್ನ ಈ ಹಿಂದಿನ ಬರಹ ಗಳಲ್ಲಿ ತಿಳಿಸಿದಂತೆ ನಾ ಹುಟ್ಟಿದ್ದು ಮೈಸೂರಿನಲ್ಲಿ..
ನಾ ಹುಟ್ಟಿ ಸ್ವಲ್ಪ ದಿನಗಳ ನಂತರ (1978 ರ ಸಮಯ) ಆಗ ಮೈಸೂರಿನಲ್ಲಿ ಪ್ರತಿಷ್ಠಿತ ಪ್ರಸಿದ್ಧ ಶ್ರೀ ಗಂಗಾಧರ ಶಾಸ್ತ್ರಿಗಳು ಅಂತ ಜ್ಯೋತಿಷ್ಯರು ಇದ್ದರು.. ಅವರ ಬಳಿ ನನ್ನ ಅಮ್ಮ ಹಾಗೂ ಅಜ್ಜಿ (ಅಮ್ಮನ ಅಮ್ಮ) ಹೋಗಿ ಜಾತಕ ಬರೆಸಿದ್ದಾರೆ.. ಆಗ ಗಂಗಾಧರ್ ಶಾಸ್ತ್ರಿಗಳು ಜಾತಕವನ್ನು ಬರೆದು ” ಈ ಹುಡುಗ ಬೆಳೆದು ದೊಡ್ಡವನಾದ ಮೇಲೆ ತುಂಬ ಸ್ನೇಹಿತರನ್ನು ಸಂಪಾದಿಸುತ್ತಾನೆ..ಹೆಸರು ಸಂಪಾದನೆ ಮಾಡುತ್ತಾನೆ. ಕೆ ವಿ ಪುಟ್ಟಪ್ಪ ( Kuvempu ) ಇದ್ದಾರಲ್ಲ ಆ ರೀತಿ” ಎಂದು ನನ್ನ ತಾಯಿಗೆ ಹಾಗೂ ಅಜ್ಜಿಗೆ ಖುಷಿಯಾಗುವ ರೀತಿ ಮಾತಾಡಿ ಕಳಿಸಿದ್ದಾರೆ.. ಗಂಗಾಧರ ಶಾಸ್ತ್ರಿಗಳ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ನನ್ನ ತಾಯಿಗೆ, ನನ್ನ ಮಗನು ಕೂಡ ಕೆ ವಿ ಪುಟ್ಟಪ್ಪ ರವರಂತೆ ಅನ್ನೋ ಆಸೆಯಿಂದ, ಮನೆಗೆ ಬಂದ ತಕ್ಷಣ ತೊಟ್ಟಿಲಿನಲ್ಲಿ ಇದ್ದ ನನ್ನನ್ನು ನೋಡಿ ನನ್ನ ಅಮ್ಮ ನನಗೆ ಇಟ್ಟ ಅಡ್ಡ ಹೆಸರು ”ಪುಟ್ಟು”. ಈ ಕಥೆನ ನಮ್ಮಜ್ಜಿ ನನಗೆ ಆಗಾಗ ಹೇಳುತ್ತಿದ್ದರು..
ಅಂದಿನಿಂದ ನನ್ನ ಪ್ರತಿಯೊಂದು ವಿಚಾರ ಗಳಲ್ಲಿ , ನಿರ್ಧಾರಗಳಲ್ಲಿ ಈ ಪುಟ್ಟು ಹಿಂದಿನ ದೊಡ್ಡ ಶಕ್ತಿ ನನ್ನ ತಾಯಿ Ushadevi.. ನನ್ನ ತಾಯಿಗೆ ಹೆಣ್ಣುಮಗಳು ಇಲ್ಲ ಅನ್ನೋ ಬೇಜಾರೆ ಇಲ್ಲ.. ಎಲ್ಲಾ ತಾಯಂದಿರು ಅವರ ಮಕ್ಕಳಿಗೆ ಮಾಡುವಂತೆ ಚಿಕ್ಕವಯಸ್ಸಿನಲ್ಲಿ ನನಗೆ ಮೊಗ್ಗಿನ ಜಡೆ ಹಾಕೋದು, ಹೆಣ್ಣುಮಕ್ಕಳ ತರ ಅಲಂಕಾರ ಮಾಡೋದು ಇದ್ಯಾವುದು ನಮ್ಮಮ್ಮ ನನಗೆ ಮಾಡಲಿಲ್ಲ.. ಸಣ್ಣವಯಸ್ಸಿನಲ್ಲೇ ನನಗೆ ಉಂಗುರ, ಸರ, bracelet ಇವೆಲ್ಲವನ್ನು ಅದರ ಬೆಲೆ ಗೊತ್ತಾಗೋ ಮುಂಚೆಯೇ ನನ್ನಮ್ಮ ನನಗೆ ಮಾಡಿಸಿಕೊಟ್ಟಿದ್ದರು.. ಇದನ್ನೆಲ್ಲ ನಾನು ದೊಡ್ಡಸ್ತಿಕೆ ಗಾಗಿ ಹೇಳ್ತಾ ಇಲ್ಲ.. ಸಾಮಾನ್ಯವಾಗಿ ಹೆಣ್ಣುಮಕ್ಕಳು ಆದಾಗ ಅವರಿಗಾಗಿ ಚಿನ್ನದ ಒಡವೆಗಳು ಮಾಡಿಸೋದು ವಾಡಿಕೆ.. ಆದರೆ ನನ್ನಮ್ಮ ನನ್ನ ಮಗ ಗಂಡಾದರೂ, ಗಂಡು ಮಕ್ಕಳು ಹಾಕುವ ಎಲ್ಲಾ ರೀತಿಯ ಆಭರಣಗಳನ್ನು ಅವನಿಗೆ ಕೊಡಿಸಬೇಕು ಅನ್ನೋ ಮನಸ್ಸು ದೊಡ್ಡದಾಗಿತ್ತು, ಬಂಗಾರ ಗಿಂತ ದೊಡ್ಡದಾಗಿತ್ತು.. ಇಷ್ಟೆಲ್ಲಾ ಈ ಚಿನ್ನದ ವಿಷ್ಯ ನಾನ್ ಏನಕ್ಕೆ ಹೇಳ್ತಾ ಇದ್ದೀನಿ ಅಂದ್ರೆ ನಾನು ಒಂದು ತಪ್ಪು ಮಾಡಿದ್ದೀನಿ..ಎಂದೂ ಸರಿಪಡಿಸಲಾಗದ ತಪ್ಪು
ನನ್ನಮ್ಮ 2017ರಲ್ಲಿ ನನ್ನನ್ನು ಬಿಟ್ಟು ದೈಹಿಕವಾಗಿ ದೂರವಾದರೂ.. 2015 ಜೂಲೈ 9th ನನ್ನ ಹುಟ್ಟು ಹಬ್ಬದ ದಿನ.. ದೇವರಿಗೆ ನಮಸ್ಕರಿಸಿ, ಅಪ್ಪ ಅಮ್ಮನ ಕಾಲಿಗೆ ಬಿದ್ದಾಗ, ನನ್ನನ್ನು ಅಲ್ಲೇ ದೇವರ ಮನೆಯಲ್ಲಿ ಕೂರಿಸಿ ಕಣ್ಣು ಮುಚ್ಚಿ ಕೊಳಕ್ಕೆ ಹೇಳಿದರು.. ಕಣ್ಣು ಮುಚ್ಚಿದ ತಕ್ಷಣ ನನ್ನ ಅಮ್ಮ ನನ್ನ ಕೈಯಿಗೆ ಏನೂ ತೊಡಿಸಿ ದಂತಾಯಿತು.. ಕಣ್ಣು ಬಿಟ್ಟು ನೋಡಿದಾಗ ‘ ಚಿನ್ನದ ಬಳೆ’.. ನನ್ನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನಾ ತುಂಬಾ ಆಸೆ ಪಟ್ಟ ಆ ಬಳೆಯನ್ನ ಮಾಡಿಸಿಕೊಟ್ಟಿದ್ದರು.. ಅವರು ಅದನ್ನು ನನ್ನ ಕೈಗೆ ಹಾಕಿದ ತಕ್ಷಣ ಹೇಳಿದ ಆ ಒಂದು ಮಾತು ಇವತ್ತಿಗೂ ನನಗೆ ಕಾಡತ್ತೆ, ನೋಯಿಸುತ್ತೆ, ಅಳಿಸುತ್ತೆ.. ಅದೇನೆಂದರೆ “ನಾನು ನಿನ್ನ ಜೊತೆಗೆ ಇನ್ನೆಷ್ಟು ವರ್ಷ ಇರ್ತೀನೋ ಗೊತ್ತಿಲ್ಲ, ಆದರೆ ನಾನು ಹಾಕುತ್ತಿರುವ ಈ ಕೈಬಳೆ ಸದಾ ನಿನ್ನೊಂದಿಗೆ ಇರತ್ತೆ.. ನಾ ದೈಹಿಕವಾಗಿ ಇಲ್ಲದೇ ಹೋದರೂ ಈ ಬಳೆಯ ರೂಪದಲ್ಲಿ ನಿನ್ನೊಂದಿಗೆ, ನಿನ್ನ ಜೊತೆಗೆ ಇರ್ತೀನಿ”.
ಇಂತಹ ಅದ್ಭುತವಾದ ಉಡುಗೊರೆಯನ್ನು ನಾನು ಹೇಗೆ ಕಾಪಾಡ್ಕೋಬೇಕು? ನೀವೇ ಹೇಳಿ..
2017 ಜೂನ್ 13ರಂದು ನನ್ನಮ್ಮ ಬಾರದ ಲೋಕಕ್ಕೆ ಬಾನ ದಾರಿಯ ಕಡೆಗೆ ಪಯಣಿಸಿದರು.. ಅಲ್ಲಿಯವರೆಗೂ ನನಗೆ ನನ್ನ ಭವಿಷ್ಯದ ಬಗ್ಗೆ, ಪ್ರಸ್ತುತ ಜೀವನದ ಬಗ್ಗೆ, ನನ್ನ ಚಲನಚಿತ್ರದ ಸೋಲುಗಳ ಬಗ್ಗೆ, ಯಾವುದರ ಬಗ್ಗೆನೂ ಚಿಂತೆ ಇರಲಿಲ್ಲ.. ನನ್ನ ಕಾಯುತ್ತಾ ಕಾಪಾಡುತ್ತಿದ್ದ ಶಕ್ತಿ ನನ್ನಮ್ಮ..
ಅಮ್ಮ ಹೋದ ನಂತರ ತುಂಬ ಆಗಾತಕ್ಕೆ ಒಳಗಾದೆ.. ಮೊದಲ ವರ್ಷವಂತೂ ಅವರಿಲ್ಲ ಅನ್ನೋದೇ ಕನೆಕ್ಟ್ ಆಗ್ತಾ ಇರ್ಲಿಲ್ಲ.. ಮಲಗಿರುತ್ತಿದ್ದೆ, sudden ಆಗಿ ಎಚ್ರ ಆಗೋದು.. ಆಗ ನನ್ನಮ್ಮ ಇಲ್ಲ ಅನ್ನೋ ನಿಜ ಥಟ್ಟಂತೆ ಫ್ಲಾಶ್ ಆಗೋದು.. ಈ ಸತ್ಯವನ್ನು ನನಗೆ ಇನ್ನೂ ಅರಗಿಸಿಕೊಳ್ಳೋಕೆ ಆಗುತ್ತಿಲ್ಲ..
2019 ಜನವರಿಯಲ್ಲಿ, ನಾನು USA ಗೆ ಪ್ರವಾಸ ಮಾಡಿದೆ.. ಇದು ನನ್ನ ಅಮೆರಿಕಾಗೆ ಎರಡನೇ ಭೇಟಿ.. ಸುಂದರ ಜಾಗಗಳು, ಅದ್ಭುತವಾದ ವಾತಾವರಣ ಈ ಎಲ್ಲಾ ಸಿಹಿ ನೆನಪುಗಳೊಂದಿಗೆ ನನ್ನ ಜೀವನದಲ್ಲಿ ನಾನೆಂದೂ ಮರೆಯಲಾಗದ ಒಂದು ಕಹಿ ನೆನಪು ಕೂಡ ಆ ಊರು, ಆ ದೇಶ, ಆ ಜಾಗದಲ್ಲಿ ನನಗಾಯಿತು..
ಹೀಗೆ ಊರೆಲ್ಲ ಸುತ್ತಾಡಿ ವಾಪಸ್ ನನ್ನ ರೂಮಿಗೆ ಬರುವ ಸಂದರ್ಭದಲ್ಲಿ ಯಾಕೋ ನನಗೆ stomach upset ಆಯ್ತು.. ಹೋಟೆಲ್ ಗೆ ತಲುಪಿದ ನಾನು ಪ್ರಕೃತಿ ಕರೆಗೆ (nature call) ಮೇಲೆ ನನ್ನ ರೂಮಿಗೆ ಹೋಗುವಷ್ಟು ಕೂಡ ನನ್ನ ಕೈಯಲ್ಲಿ ಆಗಲಿಲ್ಲ.. ಅಲ್ಲೇ ಕಾಫಿ ಶಾಪ್ ನಲ್ಲಿ ಇದ್ದ Rest room ನ ಯೂಸ್ ಮಾಡಕ್ ಹೋದೆ.. ಒಳ್ಳೆಯದೋ-ಕೆಟ್ಟದೋ ಗೊತ್ತಿಲ್ಲ. ನನಗೆ ಒಂದು ಅಭ್ಯಾಸವಿದೆ.. ಈ ದಿನನಿತ್ಯದ ಪ್ರಕ್ರಿಯೆಯನ್ನ ನಡೆಸಬೇಕಾದರೆ ದೇವರ ಪೆಂಡೆಂಟ್ ಆಗಲಿ, ಉಂಗುರ ಆಗಲಿ, ಇಲ್ಲ ದೇವರಂತ ನನ್ನ ತಾಯಿ ಕೊಟ್ಟ ಬಳೆಯಾಗಲಿ ಬಿಚ್ಚಿಟ್ಟು ಹೋಗುವ ಅಭ್ಯಾಸ.. ಅದೇ ರೀತಿ ಆ ಹೋಟೆಲಿನ ಆ ರೆಸ್ಟ್ ರೂಮ್ನಲ್ಲಿ ಕೂಡ ಮಾಡಿದೆ.. ನನ್ನ ಪೆದ್ದುತನ, ನನ್ನ negligency ಬಿಚ್ಚಿಟ್ಟಿದ್ದ ಸರ, ಉಂಗುರ ಎಲ್ಲವನ್ನು ಧರಿಸಿದೆ..
ನನ್ನ ಬುದ್ಧಿಗೆ ಅದೇನು ಮಂಕು ಬಡಿದಿತೋ, ಅದು ಯಾವ ಅಜಾಗೃಕತೆಯೋ, ಬೆಲೆ ಕಟ್ಟುವಂತ ಎಲ್ಲಾ ವಸ್ತುಗಳನ್ನು ಹಾಕಿಕೊಂಡು, ಬೆಲೆ ಕಟ್ಟಲಾಗದ ಮರೆಯಲಾಗದ ನನ್ನ ಅತ್ಯಂತ ಅಮೂಲ್ಯವಾದ ಆಸ್ತಿಯನ್ನು ಅಲ್ಲೇ ಮರೆತು ಬಿಟ್ಟೆ.. ಸ್ವಲ್ಪ ಹೊತ್ತಿನ ನಂತರ ಮರೆತಿರುವ ವಿಷ್ಯ ಅರಿವಾಗಿ ಅಲ್ಲೆಲ್ಲಾ ಕಡೆ ಹುಡುಕಿದೆ.. ಹೋಟೆಲ್ ಸಿಬ್ಬಂದಿಯವರನ್ನು ಬೇಡಿಕೊಂಡೆ.. ಎಷ್ಟೇ ಹುಡುಕಿದರೂ ಏನೇ ಪ್ರಯತ್ನ ಪಟ್ಟರೂ ಅದು ನನಗೆ ಸಿಗಲಿಲ್ಲ..
ದೈಹಿಕವಾಗಿ ನನ್ನಮ್ಮ 2017 ನಲ್ಲಿ ನನ್ನಿಂದ ದೂರ ಆದರೂ.. 2019 ಜನವರಿಯಲ್ಲಿ ನನ್ನ ಕೈಯಲ್ಲೇ ಸದಾ ಇರ್ತೀನಿ ಎಂದು ನನ್ನೊಂದಿಗೆ ಇದ್ದ ಆ ನನ್ನ ತಾಯಿಯನ್ನು ನಾನೇ ದೂರ ಮಾಡಿದೆ.. ನನ್ನ ಈ ತಪ್ಪನ್ನು ಎಂದು ಸರಿಪಡಿಸಿಕೊಳ್ಳೊಕ್ಕೆ ಆಗಲ್ಲ.. ದೈಹಿಕವಾಗಿಯೂ ನನ್ನ ಅಮ್ಮನನ್ನು ನಾನು ಉಳಿಸಿಕೊಳ್ಳೋಕೆ ಆಗಲಿಲ್ಲ.. ಅವರು ಕೊಟ್ಟ ಉಡುಗೊರೆಯು ನನ್ನೊಂದಿಗೆ ಕಾಪಾಡಿ ಕೊಳ್ಳೋಕೆ ಆಗಲಿಲ್ಲ..
ಅಮ್ಮ, ಕ್ಷಮಿಸಿಬಿಡು..
ಇಂತಿ ನಿನ್ನ,
ನತದೃಷ್ಟ ಪುಟ್ಟು.
You are great sir